ನೀರ್ಪಾಜೆ ಭೀಮಭಟ್ಟ (ಏಪ್ರಿಲ್ ೧೨, ೧೯೩೪ - ಡಿಸೆಂಬರ್ ೧೨, ೨೦೦೨) ಕನ್ನಡ, ಸಂಸ್ಕೃತ ಭಾಷೆಗಳ ವಿದ್ವಾಂಸರಾಗಿ ಮತ್ತು ಕನ್ನಡದ ಮಹಾನ್ ಲೇಖಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. == ಜೀವನ == ಕನ್ನಡ, ಹಿಂದಿ ಮತ್ತು ಸಂಸ್ಕೃತಗಳ ಮಹಾನ್ ವಿದ್ವಾಂಸರಾದ ನೀರ್ಪಾಜೆ ಭೀಮಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ಏಪ್ರಿಲ್ ೧೨, ೧೯೩೪ರಂದು ಜನಿಸಿದರು. ತಂದೆ ಶಂಕರಭಟ್ಟರು. ತಾಯಿ ಲಕ್ಷ್ಮೀ ಅಮ್ಮನವರು. ಕಾಸರಗೋಡು ತಾಲ್ಲೂಕಿನ ಪೆರಡಾಲದ ನೀರ್ಚಾಲಿನ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಕೈಗೊಂಡು ಸಾಹಿತ್ಯ ಶಿರೋಮಣಿ ಪದವಿಗೆ ಪಾತ್ರರಾದ ಭೀಮಭಟ್ಟರು ಹಿಂದಿಯ ರಾಷ್ಟ್ರಭಾಷಾ ವಿಶಾರದರೂ ಹೌದು. == ವಿದ್ಯಾರ್ಥಿ ದೆಸೆಯಲ್ಲೇ ಬರಹಗಳು == ನೀರ್ಪಾಜೆ ಭೀಮಭಟ್ಟರು ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ‘ಕಾಶ್ಮೀರ ಸಂಧಾನ ಸಮುದ್ಯಮ’ ಎಂಬ ಕೃತಿಯನ್ನು ರಚಿಸಿದ್ದರಲ್ಲದೆ ಹೈದರಾಬಾದ್ ವಿಜಯಂ’, ‘ಗೋವಾ ಸ್ವತಂತ್ರಂ` ಮುಂತಾದ ನಾಟಕಗಳನ್ನು ಮೂಡಿಸಿದ್ದರು. ಈ ನಾಟಕ ಪ್ರಯೋಗಗಳು ಕಾರಂತ, ಮಾಸ್ತಿ ಅವರಂತಹ ಹಿರಿಯರ ಮೆಚ್ಚುಗೆ ಗಳಿಸಿದ್ದವು. ರಾಷ್ಟ್ರೀಯ ಸಂಸ್ಕೃತ ಗ್ರಂಥದಲ್ಲಿ ನೀರ್ಪಾಜೆ ಭೀಮಭಟ್ಟರನ್ನು ಕುರಿತು ಆಧುನಿಕ ನಾಟಕಕಾರೆಂಬ ಉಲ್ಲೇಖವಿದೆಯಲ್ಲದೆ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರು ಸಂಪಾದಿಸಿದ ‘ಭಾರತೀಯ ಕವಿತಾ – 1955’ ಸಂಪುಟದಲ್ಲಿ ನೀರ್ಪಾಜೆ ಭೀಮಭಟ್ಟರ ಕವಿತೆ ಸೇರ್ಪಡೆಯಾಗಿದೆ. == ಸಂಸ್ಕೃತದಿಂದ ಕನ್ನಡಕ್ಕೆ ರೂಪಾಂತರಗಳು == ನೀರ್ಪಾಜೆ ಭೀಮಭಟ್ಟರು ಸಂಸ್ಕೃತದಿಂದ ಅನುವಾದಿಸಿರುವ ನಾಟಕಗಳಲ್ಲಿ ಮಾಲತಿ ಮಾಧವ, ಮಣ್ಣಿನ ಬಂಡಿ, ಮಾಳವಿಕಾಗ್ನಿ ಮಿತ್ರ, ಊರ್ವಶಿ ಪ್ರಮುಖವಾದವುಗಳಾಗಿವೆ.. ಇವಲ್ಲದೆ ರಾಜಶೇಖರನ ಕಾವ್ಯಮೀಮಾಂಸೆ, ಮಹಾಕವಿ ಬಿಲ್ಹಣನ ವಿಕ್ರಮಾಂಕದೇವ ಚರಿತಂ ಮುಂತಾದವುಗಳನ್ನು ಸಹಾ ಅವರು ಕನ್ನಡಕ್ಕೆ ತಂದಿದ್ದಾರೆ. == ಮಹತ್ವದ ರಾಜತರಂಗಿಣಿ == ನೀರ್ಪಾಜೆ ಭೀಮಭಟ್ಟರು ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ‘ರಾಜತರಂಗಿಣಿ’ ಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರಕ್ಕೆ ಪಾತ್ರರಾದವರು. ‘ರಾಜತರಂಗಿಣಿ’ ಕೃತಿಯು ಪ್ರಾಚೀನ ಕಾಲದಿಂದ ಮೊದಲ್ಗೊಂಡಂತೆ 12ನೇ ಶತಮಾನದವರೆಗಿನ ಕಾಶ್ಮೀರ ರಾಜ್ಯದಲ್ಲಿನ (ಕಲ್ಹಣನ ಕಾಲ ಸುಮಾರು 1100 - 1200) ರಾಜಮಹಾರಾಜರ ಚರಿತೆ, ಆಡಳಿತದಲ್ಲಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳು, ಮೂಢ ನಂಬಿಕೆ, ಸಾಮಾಜಿಕ ಅನಿಷ್ಟಗಳು,, ಪ್ರಜೆಗಳ ಕಷ್ಟಕಾರ್ಪಣ್ಯಗಳು, ಸಮಾಜ ಕಂಟಕರು, ಭಷ್ಟಾಚಾರಿಗಳು, ಕಂದಾಯ – ತೆರಿಗೆ ಪದ್ಧತಿ ಮುಂತಾದ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಯೆಂದು ಪ್ರಸಿದ್ಧಿಗೊಂಡಿದ್ದು, ಇದನ್ನು ಕನ್ನಡಕ್ಕೆ ಗದ್ಯರೂಪದಲ್ಲಿ ತಂದ ಭೀಮಭಟ್ಟರ ಕಾರ್ಯತ ಪ್ರಶಂಸನೀಯವೆನಿಸಿದೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ಅನುದಾನ ಪಡೆದು ಕಾಶ್ಮೀರ ರಾಜ್ಯದಲ್ಲಿ ಸಂಚರಿಸಿ ಬನಾರಸ್, ಬರೋಡ ವಿಶ್ವವಿದ್ಯಾಲಯಗಳನ್ನು ಸಂದರ್ಶಿಸಿ, ಅಗತ್ಯ ಮಾಹಿತಿ ಸಂಗ್ರಹಿಸಿ ರಚಿಸಿದ ಕೃತಿ ಇದಾಗಿದೆ. == ಪತ್ರಿಕೋದ್ಯಮದಲ್ಲಿ == ಪತ್ರಿಕೋದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡ ಭೀಮಭಟ್ಟರು ಕಡೆಂಗೋಡ್ಲು ಶಂಕರಭಟ್ಟರ ರಾಷ್ಟ್ರಮತ ಪತ್ರಿಕೆಯಲ್ಲಿ ಕೆಲಕಾಲ ಕಾರ್ಯಿ ನಿರ್ವಹಿಸಿದ ನಂತರ ಹುಬ್ಬಳ್ಳಿಗೆ ತೆರಳಿ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಮುಂತಾದ ಪತ್ರಿಕೆಗಳಲ್ಲೂ ಕೆಲಕಾಲ ಕಾರ್ಯರ ನಿರ್ವಹಿಸಿ ಪುನ: ಊರಿಗೆ ಹಿಂದಿರುಗಿ ಕೃಷಿ ಕಾರ್ಯಕದಲ್ಲಿ ತೊಡಗಿಕೊಂಡರು. ಇದೇ ಸಮಯದಲ್ಲಿ ಜನವಾಹಿನಿ, ನೇತ್ರಾವತಿ ವಾರ್ತೆ ಮುಂತಾದ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ ಕಾರ್ಯನಿರ್ವಹಿಸಿದ್ದು ಅವರ ಈ ಬರಹಗಳು ಚೌ ಚೌ, ಚಿತ್ರಾನ್ನ, ಶೂನ್ಯವೇಳೆ, ಸೋತುಗೆದ್ದವರು, ನಾಮದ ಫಲ, ಹೆಂಡತಿ ಮತ್ತು ಪೆಟ್ಟು ಮುಂತಾದ ಸಂಕಲನಗಳಲ್ಲಿ ಮೂಡಿಬಂದಿವೆ. == ವೈವಿಧ್ಯ ಬರಹಗಳು == ಮೇಲ್ಕಂಡ ಕೃತಿಗಳಲ್ಲದೆ ಹಸ್ತ ಶುದ್ಧಿ (ವಿಡಂಬನೆ), ರಸವತ್, ಮನನ, ಸಾಹಿತ್ಯ ಪ್ರಜ್ಞೆ (ಪ್ರಬಂಧಗಳು), ಯುಗ ಪುರುಷ ಉಡುಪರು (ವ್ಯಕ್ತಿ ಚಿತ್ರ), ಕಾಳಿದಾಸ ಸಮೀಕ್ಷೆ (ವಿಮರ್ಶೆ) ಮುಂತಾದ ಹಲವಾರು ಕೃತಿಗಳನ್ನು ಭೀಮಭಟ್ಟರು ರಚಿಸಿದ್ದಾರೆ. . == ರಾಜಕೀಯ, ಸಾಹಿತ್ಯ, ಯಕ್ಷಗಾನ ಕ್ಷೇತ್ರಗಳಲ್ಲಿ == ಸಾಮಾಜಿಕ ಕಾರ್ಯಳಗಳಲ್ಲಿಯೂ ಕ್ರಿಯಾಶೀಲರಾಗಿದ್ದ ಭೀಮಭಟ್ಟರು ಮಂಡಲ ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಹೀಗೆ ರಾಜಕೀಯ, ಸಾಹಿತ್ಯ, ಯಕ್ಷಗಾನ ಮುಂತಾದ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. == ಪ್ರಕಾಶನ == ಭೀಮಭಟ್ಟರು ತಮ್ಮದೇ ಅಭ್ಯುದಯ ಪ್ರಕಾಶನದಡಿಯಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ೧೯೯೮ರ ವರ್ಷದಲ್ಲಿ ಅಭಿಮಾನಿಗಳು, ಸಾಹಿತ್ಯಾಸಕ್ತರು ಕೂಡಿ ಅರ್ಪಿಸಿದ ಗೌರವ ಗ್ರಂಥ ‘ಅಭ್ಯುದಯ’. == ವಿದಾಯ == ಸಾಹಿತ್ಯ ಲೋಕದಲ್ಲಿ ಮಹತ್ತರವಾದ ಕಾರ್ಯ’ವನ್ನು ಸಾಧಿಸಿದ ನೀರ್ಪಾಜೆ ಭೀಮಭಟ್ಟರು ಭಟ್ಟರು ೨೦೦೨ರ ವರ್ಷದ ಡಿಸೆಂಬರ್ ೧೨ರಂದು.ಈ ಲೋಕವನ್ನಗಲಿದರು. ೨೦೦೩ರ ವರ್ಷದಲ್ಲಿ ‘ಶಿರೋಮಣಿ’ ಎಂಬ ಸಂಸ್ಮರಣ ಗ್ರಂಥವು ಪ್ರಕಟವಾಗಿದ್ದಲ್ಲದೆ ನೀರ್ಪಾಜೆಯವರ ಹೆಸರನ್ನು ಚಿರಸ್ಥಾಯಿಯಾಗಿಸಲು ೨೦೦೪ರಲ್ಲಿ ‘ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನ’ ವು ಪ್ರಾರಂಭಗೊಂಡಿದ್ದು, ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. == ಮಾಹಿತಿ ಕೃಪೆ == ಕಣಜ 2016-05-20 ವೇಬ್ಯಾಕ್ ಮೆಷಿನ್ ನಲ್ಲಿ.